ನಾನು, ಅನ್ವರ್ ಮಾಣಿಪ್ಪಾಡಿ, ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಚರ್ಚೆಗೊಳಗಾದ ಒಂದು ವಿಷಯ
ವಕ್ಫ್ ಕಾಯ್ದೆ
ಹನ್ನೆರಡು ವರ್ಷಗಳಿಂದ ವಕ್ಫ್ ಹಗರಣವನ್ನು ಬಯಲಾಗಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಈ ಹಗರಣದ ಸರಳ ವಿವರಣೆ ನೀಡುವುದಾದರೆ: ಕರ್ನಾಟಕದಲ್ಲಿ ಸುಮಾರು 29,000 ಎಕರೆ ವಕ್ಫ್ ಭೂಮಿಯನ್ನು ಕಬಳಿಸಲಾಗಿದೆ. ಈ ಮುಗ್ಧ ಮುಸಲ್ಮಾನರ ಆದಾಯವನ್ನು ರಾಜಕೀಯ ಮುಖಂಡರು ಹಾಗೂ ಭ್ರಷ್ಟ ಅಧಿಕಾರಿಗಳು ಅಕ್ರಮವಾಗಿ ಕಬಳಿಸುತ್ತಿದ್ದಾರೆ. ಈ ಭೂಮಿಯ ಮೌಲ್ಯವು ಸುಮಾರು 2 ಲಕ್ಷ 30 ಸಾವಿರ ಕೋಟಿ ರೂಪಾಯಿಗಳಷ್ಟು ಇರುವುದರಿಂದ, ಮುಸಲ್ಮಾನ ಸಮುದಾಯಕ್ಕೆ ತಕ್ಕ ಸೌಲಭ್ಯಗಳು ಸಿಕ್ಕಿಲ್ಲ. ಇದು ಸಮಸ್ಯೆಯ ಒಂದು ಚಿಕ್ಕ ಭಾಗ.
ಈ ವಿಷಯಕ್ಕೆ ಸಂಬಂಧಿಸಿದಂತೆ, 14/10/2024 ರಂದು ದೆಹಲಿಯಲ್ಲಿ ನಡೆದ JPC ಸಭೆಗೆ ನನಗೆ ಆಹ್ವಾನ ಬಂದಿತ್ತು. ಪ್ರಾಮಾಣಿಕ ವಾಗಿ ನನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದೇನೆ ನನ್ನ ಭಾಷಣದ ಪ್ರತಿಯನ್ನು ನೀವು ನೋಡಲು, ಕೆಳಗಿನ ಲಿಂಕ್‌ನಲ್ಲಿ ಕ್ಲಿಕ್ ಮಾಡಬಹುದು.
ನನಗೆ ಆಹ್ವಾನ ನೀಡಲು ಕಾರಣವೆಂದರೆ, 2012ರಲ್ಲಿ ನಾನು ವಕ್ಫ್ ಹಗರಣದ ವರದಿ ನ್ನು ಸರ್ಕಾರಕ್ಕೆ ಸಲ್ಲಿಸಿದ್ದೆ.
ನನ್ನನ್ನು BJP ಏಜೆಂಟ್, ಕಮ್ಯುನಿಸ್ಟ್ ಅಥವಾ RSS ಏಜೆಂಟ್ ಎಂದು ಹೇಳಿದವರಿದ್ದಾರೆ ಆದರೆ ನನ್ನ ವಾದ ಯಾವಾಗಲೂ ಸ್ಪಷ್ಟವಾಗಿತ್ತು: ವಕ್ಫ್ ಭೂಮಿ, ಮಸೀದಿಗಳು, ದರ್ಗಾಗಳು ಮುಂತಾದವುಗಳು ಮುಸಲ್ಮಾನರಿಗೆ ಸೇರಿದ ಆಸ್ತಿಗಳಾಗಿದ್ದು, ಅವುಗಳನ್ನು ಭ್ರಷ್ಟರಿಂದ ರಕ್ಷಿಸಲು ಕಾನೂನು ಬದ್ಧ ತಿದ್ದುಪಡಿ ಮಾಡಬೇಕೆಂದು ನಾನು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೆ. ಮುಸಲ್ಮಾನರಿಗೆ ನಾನು ಕರೆ ನೀಡಿದ್ದೇನೆ, ಈ ಹಗರಣದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು.
ನನ್ನ ಮೂಲ ಉದ್ದೇಶ ಮಾತ್ರ ಒಂದು: 2 ಲಕ್ಷ 30 ಸಾವಿರ ಕೋಟಿ ರೂಪಾಯಿ ಮೌಲ್ಯದ ವಕ್ಫ್ ಭೂಮಿಯನ್ನು ಮರಳಿ ಮುಸಲ್ಮಾನರ ಅಭಿವೃದ್ದಿಗೆ ಬಳಸಬೇಕೆಂದು ನಾನು ಬದ್ಧನಾಗಿದ್ದೇನೆ. ಜೊತೆಗೆ, ವಕ್ಫ್ ಬೋರ್ಡ್ ನಲ್ಲಿ ನಡೆಯುತ್ತಿರುವ ಹಗರಣಗಳಿಗೆ ಕಡಿವಾಣ ಹಾಕಬೇಕು. ವಕ್ಫ್ ಬೋರ್ಡ್‌ನಿಂದ ಬರುವ ಸುಮಾರು 200 ಕೋಟಿ ತಿಂಗಳ ಆದಾಯ ನೇರವಾಗಿ ಮುಸಲ್ಮಾನರ ಬಡ ಮುಸಲ್ಮಾನರ ಕಲ್ಯಾಣಕ್ಕೆ ಬಳಸಬೇಕು.
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಮಾತಾಡುವಾಗ, ಒಂದು ಸತ್ಯವನ್ನು ಸ್ಪಷ್ಟಪಡಿಸಬೇಕು. ಯಾವುದೇ ತಿದ್ದುಪಡಿ ತಂದರೂ, ಅದು ಇಸ್ಲಾಂ ಮತ್ತು ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಅಥವಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ, ನಾನು ಅದರ ವಿರುದ್ಧ ಹೋರಾಟ ಮಾಡಲು ಸದಾ ಸಿದ್ಧನಿದ್ದೇನೆ. ಇಂತಹ ಕಾನೂನು ತಿದ್ದುಪಡಿಯು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ತೊಂದರೆ ತಂದರೆ, ನಾನು ಸುಪ್ರೀಂ ಕೋರ್ಟ್‌ನಲ್ಲಿಯೇ ಹೋರಾಡಿ ನ್ಯಾಯ ತರುವ ಶಕ್ತಿಯುಳ್ಳವನು.
ಕರ್ನಾಟಕದ ವಕ್ಫ್ ಹಗರಣದ ಪ್ರಕರಣದಲ್ಲಿಯೂ, ನಾನು ಸುಪ್ರೀಂ ಕೋರ್ಟ್‌ನಲ್ಲಿ ಜನಾಂಗದ ಪರವಾಗಿ ಗೆಲುವು ಸಾಧಿಸಿದ್ದೇನೆ, ಇದು ಸತ್ಯ. ಹಾಗಾಗಿ, ಈಗಿನ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಹಿತವನ್ನು ರಕ್ಷಿಸಲು ನಾನು ಹೋರಾಟ ಮಾಡುತ್ತೇನೆ ಎಂಬುದರಲ್ಲಿ ಯಾವುದೇ ಅನುಮಾನವಿರಬಾರದು.
ನನ್ನ ತಪಾಸಣೆಯಂತೆ, ಯಾವುದೇ ಕಾರಣಕ್ಕೂ ನಮ್ಮ ಜನಾಂಗಕ್ಕೆ ತೊಂದರೆ ಮಾಡಲು ಅಸಾಧ್ಯ. ಏಕೆಂದರೆ, ಈಗಾಗಲೇ ಈ ತಿದ್ದುಪಡಿ ಹಾಗೂ ವಕ್ಫ್ ಆಸ್ತಿಗಳ ಕುರಿತಂತೆ ವಿಶ್ವದ ಮುಸ್ಲಿಂ ರಾಷ್ಟ್ರಗಳು ಈ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸುತ್ತಿವೆ ಮತ್ತು ಸೂಕ್ಷ್ಮವಾಗಿ ಗಮನಿಸುತ್ತಿವೆ. ನಾವು ಇಲ್ಲಿ ಮಾಡಿದ ಯಾವುದೇ ಕ್ರಮಗಳನ್ನು ಜಾಗತಿಕ ಸಮುದಾಯ ಕಣ್ಗಾವಲಿನಿಂದ ನೋಡುತ್ತಿದೆ. ಇದರಿಂದಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ನ್ಯಾಯಯುತವಾಗಿ ನಿಭಾಯಿಸಲು ಸಾಧ್ಯವಿದೆ, ಅಗತ್ಯವಿದ್ದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯಗಳಿಗೂ ನಾವು ಹೋಗಬಹುದು.
ಒಂದು ವಿಷಯ ತೀರಾ ಸ್ಪಷ್ಟ: ನಾನು ಯಾವಾಗಲೂ ನನ್ನ ಸಮುದಾಯ, ಜನಾಂಗ, ಮತ್ತು ಧರ್ಮದ ಹಿತಕ್ಕಾಗಿ ಕೆಲಸ ಮಾಡಿದ್ದೇನೆ, ಮತ್ತು ಮುಂದೆಯೂ ಹಾಗೆಯೇ ಇರುತ್ತೇನೆ. ನಾನು ಯಾವ ಸಂದರ್ಭದಲ್ಲೂ ನನ್ನ ಜನಾಂಗಕ್ಕೆ ಅಥವಾ ಧರ್ಮಕ್ಕೆ ದ್ರೋಹ ಮಾಡುವುದಿಲ್ಲ. ವಕ್ಫ್ ಆಸ್ತಿಯನ್ನು ಸರಿಯಾಗಿ ಹಕ್ಕುಸ್ಥರಿಗೆ ತಲುಪಿಸಲು ಹಾಗೂ ಯಾವುದೇ ಹಗರಣಗಳನ್ನು ತಡೆಗಟ್ಟಲು ನಾನು ಬದ್ಧನಾಗಿದ್ದೇನೆ.
ಇದನ್ನು ಅರಿತುಕೊಳ್ಳಬೇಕಾದುದು ಏನೆಂದರೆ, ವಕ್ಫ್ ಬೋರ್ಡ್‌ನಲ್ಲಿರುವ ಹಗರಣಗಳ ಬಗ್ಗೆ ತೀವ್ರ ಕ್ರಮಗಳನ್ನು ಕೈಗೊಳ್ಳುವುದು ಅತಿ ಮುಖ್ಯ. ಪ್ರತಿಯೊಬ್ಬ ತಪ್ಪಿತಸ್ಥನಿಗೂ ಕಠಿಣ ಶಿಕ್ಷೆ ನೀಡಲು ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆದ್ದರಿಂದ, ಮುಸ್ಲಿಂ ಸಮುದಾಯವು ತನ್ನ ಹಕ್ಕುಗಳನ್ನು ಕಳೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ನನಗೆ ಜನಾಂಗದ ಹಿತವೇ ಮೊತ್ತಮೊದಲ ಆದ್ಯತೆ.
ನನಗೆ ತಿಳಿದಂತೆ, ಕರ್ನಾಟಕದ ವಕ್ಫ್ ಹಗರಣದ ಎಲ್ಲಾ ಅಪರಾಧಿಗಳು ನ್ಯಾಯಲಯದ ಮುಂದೆ ಖಂಡಿತವಾಗಿಯೂ ಹಾಜರಾಗಬೇಕಾದ ದಿವಸ ಸನ್ನಿಹಿತವಾಗಿದೆ. ಸತ್ಯಕ್ಕಾದ ಹೋರಾಟದಲ್ಲಿ ನಾನು ಯಾವತ್ತಿಗೂ ನಿಮ್ಮೊಂದಿಗೆ ಇರುತ್ತೇನೆ.
ಬಿಜೆಪಿ ಸರ್ಕಾರ ಹೇಳಿದುದಕ್ಕೆಲ್ಲ ನಾನು ಅದರ ಪಾಲುದಾರನಾಗಲು ಬಯಸುವವನಲ್ಲ. ನನ್ನ ನಿಲುವು ಯಾವ ಪಕ್ಷದ ಪರವೂ ಇಲ್ಲ, ವಿರುದ್ಧವೂ ಇಲ್ಲ— ನಾನು ಸತ್ಯಕ್ಕೂ, ನ್ಯಾಯಕ್ಕೂ ಬದ್ಧನಾಗಿರುವೆನು. ಯಾವ ತಿದ್ದುಪಡಿಯಿಂದಲಾದರೂ ಇಸ್ಲಾಂ ಮತ್ತು ಮುಸ್ಲಿಂ ಸಮುದಾಯಕ್ಕೆ ತೊಂದರೆ ಆಗುವುದಾದರೆ, ಅದರ ವಿರುದ್ಧ ಹೋರಾಟ ಮಾಡಲು ನಾನು ಸದಾ ಮುಂಚೂಣಿಯಲ್ಲಿರುತ್ತೇನೆ.
ನಾನು ಯಾವಾಗಲೂ ನನ್ನ ಧರ್ಮ, ಸಮುದಾಯ, ಮತ್ತು ಜನಾಂಗದ ಹಿತಕ್ಕಾಗಿ ಹೋರಾಟ ಮಾಡಿದ್ದೇನೆ. ಯಾವುದೇ ರಾಜಕೀಯದ ಪ್ರಭಾವ ಇಲ್ಲದೆ, ನಾನು ನನ್ನ ಧರ್ಮದ ಹಕ್ಕುಗಳಿಗಾಗಿ ನಿಂತಿರುವೆನು. ಇದು ಪಕ್ಷಪಾತವಲ್ಲ—ನೀತಿ ಮತ್ತು ಹಕ್ಕುಗಳಿಗಾಗಿ ಹೋರಾಟ.
ಹಾಗಾಗಿ, ಯಾರಾದರೂ ಈ ವಿಚಾರದಲ್ಲಿ ರಾಜಕೀಯ ಲಾಭ ಅಥವಾ ಸಮುದಾಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ನನ್ನ ನಿಲುವು ಸ್ಪಷ್ಟ: ನಾನು ಯಾವ ಪಕ್ಷದ ಪ್ರಭಾವಕ್ಕೆ ಒಳಗಾಗುವುದಿಲ್ಲ, ನನ್ನ ಸಮುದಾಯ ಮತ್ತು ಧರ್ಮದ ಹಿತವನ್ನೇ ಮೊದಲ ಆದ್ಯತೆ ಮಾಡುತ್ತೇನೆ.